ಓಲ್ಡ್‌ಹ್ಯಾಂ, ಥಾಮಸ್: ಭಾರತ ದೇಶದ ಜಿಯಾಲಾಜಿಕಲ್ ಸರ್ವೆ ಸಂಸ್ಥೆಯ ಪ್ರಥಮ ನಿರ್ದೇಶಕ. ಬ್ರಿಟಿಷ್ ಪ್ರಜೆ. ಮೊದಲು ಐರ್ಲೆಂಡಿನ ಜಿಯಾಲಾಜಿಕಲ್ ಸರ್ವೇಯ ನಿರ್ದೇಶಕನಾಗಿದ್ದ. 1850ರಲ್ಲಿ ಈತನನ್ನು ಬ್ರಿಟಿಷ್ ಸರ್ಕಾರ ಭಾರತದ ಈ ವರಿಷ್ಠ ಹುದ್ದೆಗೆ ವರ್ಗಮಾಡಿತು. ನವಸಂಸ್ಥೆಯೊಂದನ್ನು ಕಟ್ಟುವಲ್ಲಿ ಈತನ ಪ್ರತಿಭೆ ಅಸಾಮಾನ್ಯಮಟ್ಟದ್ದು. ದಕ್ಷರಾದ ಭೂವಿಜ್ಞಾನಿಗಳ ಒಂದು ಪಡೆಯನ್ನೇ ಈತ ರಚಿಸಿದ. ಅಂದಿನ ಭಾರತದ (ಪಾಕಿಸ್ತಾನ್-ಬರ್ಮ, ಸಿಂಹಳ ಎಲ್ಲವೂ ಭಾರತದ ಆಡಳಿತಕ್ಕೆ ಒಳಪಟ್ಟಿದ್ದವು) ಶಿಲಾ-ಖನಿಜ ಸಂಪತ್ತನ್ನು ಪರಿಶೀಲಿಸಿ ಭಾರತದ ಭೂವಿಜ್ಞಾನದ ಇತಿಹಾಸದ ರಚನೆಗೆ ಸುಭದ್ರ ತಳಹದಿಯನ್ನು ಹಾಕಿದ. 1851-76ರವರೆಗೆ 25 ವರ್ಷಗಳ ಕಾಲ ಈತ ಭಾರತದಲ್ಲಿ ನೆಲೆಸಿ ಅವಿರತವಾಗಿ ಕೆಲಸಮಾಡಿ ಆಧಾರಸಹಿತವಾದ ಭೂವಿದ್ಯಾನಕ್ಷೆಯನ್ನು (ಜಿಯಾಲಾಜಿಕಲ್ ಮ್ಯಾಪ್) ರಚಿಸಲು ಸರ್ವಪ್ರಯತ್ನವನ್ನೂ ಮಾಡಿದ. 1876ರಲ್ಲಿ ದೇಹಾಲಸ್ಯದಿಂದ ಈತ ವಿಶ್ರಾಂತನಾದ. ಮರುವರ್ಷವೇ ಭಾರತದ ಮೊದಲನೆಯ ಭೂವಿದ್ಯಾನಕ್ಷೆ ಪ್ರಕಟವಾಯಿತು. 1869ರಲ್ಲಿ ಕಾಚಾರ್ ಭೂಕಂಪವಾದ ಮೇಲೆ ಓಲ್ಡ್‌ಹ್ಯಾಂ ಭಾರತದ ಬಗ್ಗೆ ವಿಶೇಷ ಅಧ್ಯಯನ ಮಾಡಿ ಒಂದು ಗ್ರಂಥವನ್ನು ಪ್ರಕಟಿಸಿದ. ಇದು ಭೂಕಂಪಶಾಸ್ತ್ರಕ್ಕೆ ಆದಿಗ್ರಂಥ ಎನಿಸಿತು. ಭಾರತದ ಚಿಲುಮೆಗಳ (ಸ್ಪ್ರಿಂಗ್ಸ್‌) ಬಗ್ಗೆ ಒಂದು ಪುಸ್ತಕವನ್ನು ಬರೆದ. ಈತನ ಕೆಲಸವನ್ನು ಅಂದಿನ ಸರ್ಕಾರ ಬಲವಾಗಿ ಮೆಚ್ಚಿಕೊಂಡಿತು.

1856ರಲ್ಲಿ ಓಲ್ಡ್‌ಹ್ಯಾಂ ತನ್ನ ಸಂಸ್ಥೆಯ ಪುನವರ್ಯ್‌ವಸ್ಥೆಗೆ ಕೊಟ್ಟ ಸಲಹೆಗಳನ್ನು ಸರ್ಕಾರ ಮಂಜೂರು ಮಾಡಿತು. ಬಂಗಾಲದ ಏಷ್ಯಾಟಿಕ್ ಸೊಸೈಟಿಯ ಅಧ್ಯಕ್ಷನಾಗಿದ್ದ. ಈತನೇ ಕೋಲ್ಕತ್ತ ನಗರದ ಸೊಗಸಾದ ವಸ್ತುಸಂಗ್ರಹಾಲಯದ (ಮ್ಯೂಸಿಯಂ) ನಿರ್ಮಾಣಕ್ಕೆ ಕಾರಣ. 1867-76ರ ವರೆಗೆ ಓಲ್ಡ್‌ಹ್ಯಾಂ ಭಾರತ ವಸ್ತುಸಂಗ್ರಹಾಲಯಗಳ ನಿರ್ದೇಶಕನೂ ಆಗಿದ್ದ. ಈತ ಪ್ರಕಟಿಸಿದ 35 ಕೃತಿಗಳಿಂದ ವಿಜ್ಞಾನದ ಪ್ರಪಂಚದಲ್ಲಿ ಇವನಿಗೆ ಹಿರಿಯ ಪ್ರಶಸ್ತಿ ಲಭಿಸಿತು. ಪುರ್ವಾರ್ಧಗೋಳದಲ್ಲಿ ಕಲ್ಲಿದ್ದಲು, ಮಧ್ಯಪ್ರಾಂತಗಳ ಭೂಚರಿತ್ರೆ, ಉಲ್ಕಾಶಿಲೆಗಳು ಇತ್ಯಾದಿ ಇವನ ಪ್ರಸಿದ್ಧ ಕೃತಿಗಳು. ತನ್ನ ದುಡಿಮೆಗೆ ಒಂದು ಅಚ್ಚುಕಟ್ಟಾದ ಶಾಶ್ವತ ರೂಪವನ್ನು ಕೊಡುವುದಕ್ಕೆ ಮೊದಲೇ ಕುಂದುತ್ತಿದ್ದ ದೇಹಾರೋಗ್ಯದ ನಿಮಿತ್ತವಾಗಿ ಈತನು ಕೆಲಸದಿಂದ ವಿಶ್ರಾಂತಿಪಡೆದು ಭಾರತವನ್ನು ಬಿಡಬೇಕಾಯಿತು. ಆದರೆ ಓಲ್ಡ್‌ಹ್ಯಾಮನ ಕಾಲು ಶತಮಾನದ ಕೆಲಸವೇ ಅವನ ಸೇವೆಯ ಮೌಲ್ಯದ ಶಾಶ್ವತವಾದ ದಾಖಲೆ ಎಂಬ ಈತನ ಉತ್ತರಾಧಿಕಾರಿಯ ಮಾತು ಯಥಾರ್ಥವಾದದ್ದು.

ಓಲ್ಡ್‌ಹ್ಯಾಂ ಅಧಿಕಾರಾವಧಿಯಲ್ಲಿ ಬರ್ಮ ದೇಶಕ್ಕೆ ಮೂರು ಸಲ ಭೇಟಿಯಿತ್ತು ಅದರ ಶಿಲಾ-ಖನಿಜಸಂಪತ್ತನ್ನು ಪರೀಕ್ಷಿಸಿದ. 1855ರಲ್ಲಿ ಎನಾಂಗ್ಯಾಂಗ್ ತೈಲಕ್ಷೇತ್ರವನ್ನು ಪರಿಶೀಲಿಸುತ್ತಿದ್ದಾಗ ಶಿಲೆಗಳ ಮಡಿಕೆಗಳ ರಚನೆಗೂ ತೈಲದ ಶೇಖರಣೆಯೂ ಇರುವ ಸಂಬಂಧವನ್ನು ಅವನು ಮೊತ್ತಮೊದಲು ಗುರುತಿಸಿದ. ಇದು ಮುಂದೆ ಪ್ರಪಂಚದಲ್ಲಿ ಖನಿಜ ತೈಲ ಉದ್ಯಮದ ಮುನ್ನಡೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು.
ಓಲ್ಡ್‌ಹ್ಯಾಂ ಕಾಲದಲ್ಲಿಯೇ ಭಾರತದ ಭೂವಿಜ್ಷಾನ ಪರಿಭಾಷೆಯ ಅನೇಕ ಶಬ್ದಗಳು ಜನ್ಮ ತಾಳಿದುವು. ಉದಾಹರಣೆಗೆ ದಾಮೋದರ ಶಿಲಾಸ್ತೋಮ, ಧಾರವಾಡ ಶಿಲಾಸ್ತೋಮ, ದಖನ್ಲಾವಾ, ತಾಲ್ಚೇರ್ ಪದರ (ಹಿಮನದಿಯ ಸ್ಮಾರಕ), ಗೊಂಡ್ವಾನಾ ಶಿಲಾಸ್ತೋಮ ಇತ್ಯಾದಿ. ಹೀಗೆ ಭಾರತ ದೇಶದ ಭೂಚರಿತ್ರೆಯ ಇತಿಹಾಸದಲ್ಲಿ ಓಲ್ಡ್‌ಹ್ಯಾಂ ಚಿರಸ್ಮರಣೀಯ ಹೆಸರು.	(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ